ವಾಸನೆಯನ್ನು ಗ್ರಹಿಸಿಬಳಿಕ ಅದನ್ನು ನರಗಳ ಮೂಲಕ ಮಿದುಳಿಗೆ ರವಾನಿಸಿ ಅಲ್ಲಿ ಅದರ ಅನುಭವವನ್ನು ಉಂಟುಮಾಡುವ ವ್ಯವಸ್ಥೆ (ಆಲ್ಫ್ಯಾಕ್ಟರಿ ಸಿಸ್ಟಮ್). ಇದರಲ್ಲಿ ಮೂಗು, ಘ್ರಾಣೇಂದ್ರಿಯದ ನರಮಾರ್ಗ ಮತ್ತು ಮಿದುಳು ಸೇರಿವೆ. ಮೂಗಿನ ಹೊಳ್ಳೆಗಳ ಲೋಳೆಪೊರೆಯ ಶಿರೋಭಾಗ ಘ್ರಾಣಸಂಬಂಧಿ ಲೋಳೆಪೊರೆ ಯಿಂದ ಆವೃತವಾಗಿ ವಾಸನೆಯನ್ನು ಗ್ರಹಿಸಲು ಸಹಾಯಕವಾಗಿದೆ; ತಳಭಾಗ ಉಸಿರಾಟದ ಮಾರ್ಗ. ಮೂಗಿನ ಹೊರ ಮೇಲ್ಭಾಗದ ಆಕಾರ ಮೂಳೆಯಿಂದ ಒದಗಿದರೆ, ಕೆಳಭಾಗದ ಆಕಾರ ಮೃದ್ವಸ್ಥಿಯಿಂದ ಒದಗುತ್ತದೆ. ಹೊಳ್ಳೆಗಳ ಪಕ್ಕದ ಕೆಳಭಾಗ ಕೇವಲ ಚರ್ಮದಿಂದ ಆಗಿದ್ದು ಚರ್ಮದ ಮಧ್ಯದಲ್ಲಿರುವ ತಂತುಗಳೊಂದಿಗೆ ಕೊಬ್ಬಿನ ಅಂಶವೂ ಸೇರಿಕೊಂಡಿದೆ. ಎಡ ಮತ್ತು ಬಲ ಮೂಗಿನ ಹೊಳ್ಳೆಗಳು ಒಂದು ನಡುತಡಿಕೆಯಿಂದ ಬೇರ್ಪಟ್ಟಿವೆ. ಇದರ ಕೆಳಭಾಗವನ್ನು ಗೊಂಚಲಿನಂತಿರುವ ಗ್ರಂಥಿಗಳು ಮತ್ತು ಅಧಿಕ ರಕ್ತನಾಳಗಳನ್ನು ಒಳಗೊಂಡಿರುವ ಲೋಳೆಪೊರೆ ರೂಪಿಸಿವೆ. ನಡುತಡಿಕೆಯ ಮೇಲಿನ ಭಾಗ ಜರಡಿಯಂಥ ಮೂಳೆಯಿಂದಲೂ (ಇದರ ಹೆಸರು ಎತ್ಮಾಯಿಡ್ ಬೋನ್) ಇದರ ಕೆಳಗೆ ವೋಮರ್ ಎಂಬ ಹೆಸರಿನ ಮೂಳೆಯಿಂದಲೂ ಮುಂದಿನ ಭಾಗ ತಡಿಕೆಯ ಮೃದ್ವಸ್ಥಿಯಿಂದಲೂ ಆಗಿವೆ. ಮೂಗಿನ ಹೊಳ್ಳೆಗಳ ಪಕ್ಕದ ಗೋಡೆಗಳ ಭಾಗವು, ಅಧೋಮುಖ ಶಂಕ್ವಾಕಾರದ ಮೂಳೆಗಳಿಂದ, ಮೂರು ನಾಲೆಗಳಾಗಿ ವಿಭಾಗಗೊಂಡಿದೆ. ಈ ಮೂಳೆಗಳಿಗೆ ಕಾಙ್ಕಗಳೆಂದು ಹೆಸರು. ಮೇಲುಭಾಗದ ಕಾಙ್ಕಕ್ಕೂ ಮೂಗಿನ ಛಾವಣಿಗೂ ನಡುವೆ ಇರುವ ಜಾಗಕ್ಕೆ ಸ್ಫೀನಾಯಿಡ್ ಎಲುಬಿನ ವಾಯುಕೋಶಗಳೊಂದಿಗೆ ಸಂಪರ್ಕ ಉಂಟು. ಈ ಜಾಗವೇ ಸ್ಫೀನೊಎತ್ಮಾಯಿಡ್ ಆವರಣ. ಮೇಲಿನ ಮತ್ತು ಮಧ್ಯದ ಕಾಙ್ಕಗಳ ನಡುವೆ ಮೇಲಿನ ನಾಲೆ (ಸುಪೀರಿಯರ್ ಮಿಯೇಟಸ್) ಉಂಟು. ಈ ಜಾಗಕ್ಕೆ ಅದರ ಹಿಂಭಾಗದಲ್ಲಿನ ಎತ್ಮಾಯಿಡ್ ಮೂಳೆಯ ವಾಯುಕೋಶಗಳೊಂದಿಗೆ ಸಂಪರ್ಕ ಏರ್ಪಟ್ಟಿದೆ. ಮಧ್ಯದ ಮತ್ತು ಕೆಳಗಿನ ಕಾಙ್ಕಗಳ ನಡುವೆ ಮಧ್ಯನಾಲೆ (ಮಿಡಲ್ ಮಿಯೇಟಸ್) ಉಂಟು. ಮೂರು ನಾಲೆಗಳಲ್ಲಿ ಇದೇ ಅತ್ಯಂತ ದೊಡ್ಡದು. ಇದರಲ್ಲಿ ವೃತ್ತಾಕಾರದ ಉಬ್ಬುಭಾಗವಿದೆ. ಇದೇ ಎತ್ಮಾಯಿಡ್ ಕೋಶಗಳ ದಿಣ್ಣೆ. ಇದಕ್ಕೆ ಮೇಲ್ದವಡೆಯ ಡೊಗರಿನೊಂದಿಗೆ (ಮ್ಯಾಕ್ಸಿಲರಿ ಸೈನಸ್) ಮುಂದೆ ಹಾಗೂ ಕೆಳಗೆ ಸಂಪರ್ಕ ಏರ್ಪಟ್ಟಿದೆ. ಕೆಳಗಿನ ನಾಲೆ (ಇನ್ಫೀರಿಯರ್ ಮಿಯೇಟಸ್) ಕೆಳಕಾಙ್ಕದ ಕೆಳಗೆ ಉಂಟು. ಇದನ್ನು ಎತ್ತಿ ಹಿಡಿದರೆ ಕವಾಟದಂತಿರುವ ಮೂಗಿನ ಒಳದ್ವಾರ ಗೋಚರವಾಗುವುದು. ಮೂಗಿನ ಛಾವಣಿ ಕಿರಿದಾಗಿದೆ. ಅಲ್ಲಿ ಘ್ರಾಣಕ್ಕೆ ಸಂಬಂಧಿಸಿದ ನರಗಳು ಜರಡಿಯಂತಿರುವ ತೆಳುವಾದ ಮೂಳೆಯ ಮೂಲಕ ಹಾದುಹೋಗಿವೆ.

ಭ್ರೂಣದ ಬೆಳವಣಿಗೆಯ ಮೂರನೆಯ ವಾರದಲ್ಲಿ ತಲೆಭಾಗದ ಮುಂದುಗಡೆಯಲ್ಲಿ ಮೂಗಿನ ಎರಡು ತಗ್ಗುಗಳು ಉಂಟಾಗುತ್ತವೆ. ಘ್ರಾಣೇಂದ್ರಿಯಕ್ಕೆ ಸಂಬಂಧಿಸಿದಂತೆ ಮೂಗಿನ ಬೆಳೆವಣಿಗೆಯಲ್ಲಿ ಪ್ರಥಮವಾಗಿ ಕಾಣಿಸಿಕೊಳ್ಳುವುದು ಇದೇ. ಇಲ್ಲಿನ ಕೆಲವು ಕೋಶಗಳು ನರಕೋಶಗಳು. ಅವುಗಳ ತಂತುಗಳು ಮಿದುಳಿನ ಘ್ರಾಣ ಭಾಗಕ್ಕೆ ಸಂಪರ್ಕಗೊಂಡು ಘ್ರಾಣೇಂದ್ರಿಯ ನರಗಳಾಗಿ ವ್ಯೂಹಗೊಳ್ಳುತ್ತವೆ. ಮೂಗಿನ ಈ ತಗ್ಗುಗಳ ಮಧ್ಯೆ ದೊಡ್ಡದಾದ ಮಧ್ಯಕ ಲಲಾಟನಾಸಿಕ ಪ್ರಲಂಬ (ಮೀಡಿಯನ್ ಫ್ರಾಂಟೋನೇಸಲ್ ಪ್ರಾಸೆಸ್) ಮುಂದಲೆಯಿಂದ ಕೆಳಮುಖವಾಗಿ ಬೆಳೆಯುತ್ತ ಹೋಗಿ ಮೂಗಿನ ಮೇಲುಭಾಗವಾಗಿಯೂ ಮೂಗಿನ ಮುಂದಿನ ಭಾಗದ ನಡು ತಡಿಕೆಯ ಭಾಗವಾಗಿಯೂ ರೂಪಗೊಳ್ಳುತ್ತದೆ. ಹಾಗೆಯೇ ಪಕ್ಕನಾಸಿಕ ಪ್ರಲಂಬಗಳು (ಲ್ಯಾಟರಲ್ ನೇಸಲ್ ಪ್ರಾಸೆಸಸ್) ಕೆಳಮುಖವಾಗಿ ಬೆಳೆದು ಮೊದಲನೆಯ ಅಂತರ ಅವಯವಗಳ ವೃತ್ತಖಂಡದಿಂದ (ವಿಸರಲ್ ಆರ್ಚ್) ಹೊರಟ ಮೇಲ್ದವಡೆಯ ಆಕೃತಿಯನ್ನು ಸೇರಿಕೊಳ್ಳುತ್ತವೆ. ಹೀಗೆ ಮೂಗಿನ ಹೊಳ್ಳೆಗಳು ಉಂಟಾಗುತ್ತವೆ. ಪ್ರಾರಂಭದಲ್ಲಿ ಒಂದು ತೆಳುಪೊರೆ ಅದನ್ನು ಬಾಯಿಯಿಂದ ಬೇರ್ಪಡಿಸಿರುತ್ತದೆ. ಇದು ಬೇಗ ನಶಿಸಿ ಮೂರು ತಿಂಗಳ ಭ್ರೂಣಾವಸ್ಥೆಯವರೆಗೂ, ಅಂದರೆ ಬಾಯಿಯ ಅಟ್ಟ ಸೃಷ್ಟನೆಯಾಗುವವರೆಗೂ, ಮೂಗು ಬಾಯಿ ಒಂದೇ ಆವರಣದಿಂದ ಕೂಡಿರುತ್ತವೆ. ಮಗು ಹುಟ್ಟುವ ಹೊತ್ತಿಗೆ ಮೂಗಿನ ಹೊಳ್ಳೆಗಳು ಮೇಲಿನಿಂದ ಕೆಳಕ್ಕೆ ಅಷ್ಟು ಆಳವಿಲ್ಲದ್ದಾಗಿರುತ್ತವೆ. ಪ್ರೌಢಾವಸ್ಥೆಯ ಹೊತ್ತಿಗೆ ಅವು ಕ್ರಮೇಣ ಸಾಕಷ್ಟು ಆಳವಾಗುವುವು.

ಸಸ್ತನಿಗಳಲ್ಲಿ ಘ್ರಾಣಗ್ರಾಹಿ ನರಗಳು ಮೂಗಿನ ಹೊಳ್ಳೆಗಳ ಮೇಲಿನ ಭಾಗದಿಂದ ಪ್ರಾರಂಭವಾಗುತ್ತವೆ. ಮನುಷ್ಯನ ಮೂಗಿನ ಒಂದೊಂದು ಹೊಳ್ಳೆಯಲ್ಲೂ ಘ್ರಾಣಕ್ಕೆ ಸಂಬಂಧಪಟ್ಟಂತೆ ಹಳದಿ ವರ್ಣದ ತೆಳು ಪೊರೆ 2.5 ಚ.ಸೆಂ.ಮೀ ನಷ್ಟಿರುತ್ತದೆ. ಈ ಘ್ರಾಣ ಕ್ಷೇತ್ರದಲ್ಲಿ ಸಾವಿರಾರು ಕೋಶಗಳು ಉಂಟು. ಇವು ತೆಳು ಮತ್ತು ಉದ್ದವಾಗಿವೆ. ಬಹು ಸಂಖ್ಯೆಯ ಮತ್ತು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾದ ಲೋಮಗಳು ಇಲ್ಲಿವೆ. ಇವು ಮೂಗಿನ ಲೋಳೆಪೊರೆಯ ಮೂಲಕ ಹೊರಬಂದಿರುತ್ತವೆ. ವಿಶೇಷ ಸೂಕ್ಷ್ಮದರ್ಶಕದಿಂದ ನೋಡಿದಾಗ ಪ್ರತಿಯೊಂದು ಕೋಶಕ್ಕೂ 6-12 ಘ್ರಾಣಲೋಮಗಳಿರುವುದು ಕಂಡುಬರುತ್ತದೆ. ಕೋಶದ ಬುಡಭಾಗ ಕ್ರಮೇಣ ಕಿರಿದಾಗಿ ಒಂದು ಸೂಕ್ಷ್ಮ ನರದ ಎಳೆಯಾಗುವುದು. ಈ ರೀತಿಯ ಅನೇಕ ಎಳೆಗಳು, ಮೂಗಿನ ಮೇಲು ಭಾಗದ ಜರಡಿಯಂತಿರುವ ಮೂಳೆಯ ಮುಖಾಂತರ ಪ್ರವೇಶಿಸಿ, ಮಿದುಳಿನಲ್ಲಿ ಸಣ್ಣ ಕವಲುಗಳಂತೆ ಹೊರಚಾಚಿಕೊಂಡಿರುವ ಘ್ರಾಣ ಮುಕುಲಗಳಿಗೆ (ಆಲ್ಫ್ಯಾಕ್ಟರಿ ಬಲ್ಬುಗಳು) ಸೇರಿಕೊಳ್ಳುತ್ತವೆ. ಅಲ್ಲಿ ಈ ನರಗಳು ಮೈಟ್ರಲ್ ಕೋಶಗಳ ಕವಲುಗಳೊಂದಿಗೆ ಹೆಣೆದುಕೊಳ್ಳುತ್ತವೆ. ಘ್ರಾಣವಾಹಿನಿಯ ಮಾರ್ಗದಲ್ಲಿ ಮೈಟ್ರಲ್ ಕೋಶಗಳು ಎರಡನೆಯ ಮುಖ್ಯಕೊಂಡಿ. ಪ್ರತಿಯೊಂದು ಮೈಟ್ರಲ್ ಕೋಶದಿಂದಲೂ ನರಗಳು ಹೊರಟು ಅವೆಲ್ಲವೂ ಒಟ್ಟಾಗಿ ಘ್ರಾಣೇಂದ್ರಿಯ ವ್ಯೂಹವಾಗುತ್ತವೆ. ಈ ವ್ಯೂಹದ ನರಗಳು ಮಿದುಳಿನ ಪ್ರಿಫೈóóóರಿ ಫಾರಮ್ ಕಾರ್ಟೆಕ್ಸ್ಗೆ ಬಂದು ಸೇರುತ್ತವೆ. ಘ್ರಾಣಾನುಭವಕ್ಕೆ ಮಿದುಳಿನ ಈ ಭಾಗವೇ ಸೀಮಿತವೆಂದು ನಂಬಲಾಗಿದೆ.
ವಾಸನೆಯನ್ನು ಉಂಟುಮಾಡುವ ಪದಾರ್ಥಗಳ ಸಣ್ಣ ಕಣಗಳು ಉಸಿರಾಟದ ವಾಯುವಿನೊಂದಿಗೆ ಮೂಗಿನ ಹೊಳ್ಳೆಗಳನ್ನು ಹೊಕ್ಕು ಘ್ರಾಣಕ್ಷೇತ್ರದ ಲೋಳೆಪೊರೆಗೆ ವ್ಯಾಪಿಸುತ್ತವೆ. ವಾಯುವನ್ನು ವೇಗವಾಗಿ ಎಳೆದುಕೊಂಡಾಗ ವಾಸನೆಯ ಕಣಗಳು ಘ್ರಾಣಕ್ಷೇತ್ರವನ್ನು ಹೆಚ್ಚಾಗಿ ತಲುಪಲು ಸಹಾಯವಾಗುತ್ತದೆ. ನೆಗಡಿ ಮುಂತಾದ ರೋಗಗಳು ಕಾಣಿಸಿಕೊಂಡಾಗ ಘ್ರಾಣಕ್ಷೇತ್ರದ ಲೋಳೆಪೊರೆಯಲ್ಲಿ ಉರಿಯೂತ ಕಾಣಿಸಿಕೊಂಡು ಘ್ರಾಣಸಾಮಥರ್ಯ್ ಕಡಿಮೆ ಆಗುತ್ತದೆ. ಘ್ರಾಣಸಾವiಥರ್ಯ್ ತೀಕ್ಷ್ಣವಾಗಿರುವಂಥ ನಾಯಿ, ಹುಲಿ, ಬೆಕ್ಕು, ಮೊಲ ಇತ್ಯಾದಿ ಸಸ್ತನಿಗಳಲ್ಲಿ ಘ್ರಾಣಸಂಬಂಧಿ ಮಿದುಳಿನ ಭಾಗ ವಿಶಾಲವಾಗಿದೆ. ಇದು ಮುಂಮಿದುಳಿನ ತಳಭಾಗದ ಅತ್ಯಂತ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿಕೊಂಡಿರುತ್ತದೆ ಕೂಡ. ಕಪಿ ಮತ್ತು ಮಾನವರಲ್ಲಿ ಈ ಪ್ರಮಾಣ ಬಲು ಕಡಿಮೆ. ಇವರಲ್ಲಿ ಜೈವಿಕ ಕಾರ್ಯಗಳಿಗೆ ಘ್ರಾಣಾನುಭವಕ್ಕಿಂತ ದೃಷ್ಟಿ ಮತ್ತು ಸ್ಪರ್ಶಾನುಭವಗಳೇ ಹೆಚ್ಚು ಉಪಯೋಗದಲ್ಲಿವೆ.

ಪ್ರಾಣಿಗಳಲ್ಲಿ ಘ್ರಾಣಮಂಡಲ ವಿವಿಧ ರೀತಿಯಲ್ಲಿ ಉಂಟು. ಮೀನುಗಳಿಗಿಂತ ಕೆಳದರ್ಜೆಯ ಲ್ಯಾನ್ಸಿಲೇಟ್ ಎಂಬ ಪ್ರಾಣಿಯಲ್ಲಿ ನರಮಂಡಲದ ಮುಂತುದಿಯಲ್ಲಿ ಲೋಮಗಳಿಂದ ಕೂಡಿದ ಒಂದೇ ಒಂದು ಹಳ್ಳವಿರುತ್ತದೆ. ಬಹುಶಃ ಇದು ಮೂಲಾಂಕುರವಾದ ಘ್ರಾಣಮಂಡಲವಾಗಿರಬಹುದು. ಮುಂದಿನ ವಿಕಾಸ ಸೈಕ್ಲಸ್ಟೋಮುಗಳಲ್ಲಿ ಕಂಡುಬರುತ್ತದೆ. ಹಳ್ಳ ಮೊದಲು ಮುಮ್ಮೈ ಕಡೆಗಿದ್ದು ಅನಂತರ ಬೆನ್ನಿನ ಕಡೆ ಪಿಟ್ಯುಟರಿ ಇಳಿನಾಳಕ್ಕೆ ಸಮಾನವಾದ ದ್ವಾರವುಳ್ಳ ಹಳ್ಳವಾಗಿ ಕಾಣಬರುತ್ತದೆ. ಬಳಿಕ ಇದು ಒಳಗೆ ಎಡಬಲಭಾಗವಾಗಿ ವಿಕಾಸವಾಗುತ್ತದೆ. ಮೀನುಗಳಲ್ಲಿ ಎರಡು ಹೊರಪಕ್ಕದ ಹಳ್ಳಗಳಿದ್ದು ಅವುಗಳ ಹೊಳ್ಳೆಗಳು ತೊರ್ಕೆ (ಶಾರ್ಕ್) ಮತ್ತು ಚಟ್ಟೆ ಮೀನುಗಳಲ್ಲಿ ಮೂತಿಯ ಮುಮ್ಮೈ ಕಡೆಗೂ ಇನ್ನುಳಿದ ಮೀನುಗಳಲ್ಲಿ ಬೆನ್ನಿನ ಕಡೆಗೂ ಇರುತ್ತವೆ. ಮೀನಿನವರೆಗಿನ ಪ್ರಾಣಿಗಳ ವಿಕಾಸ ರೂಪದಲ್ಲಿ ಘ್ರಾಣಮಂಡಲ ಕೇವಲ ತಗ್ಗಿನ ಪ್ರದೇಶದಂತಿರುತ್ತದೆ. ಆದರೆ ಡಿಪ್ನಾಯ್ ಎಂಬ ಮಣ್ಣುಮೀನಿನಲ್ಲಿ ಇದು ಮುಂದುವರಿದು ಈ ತಗ್ಗಿನಿಂದ ಬಾಯಿಯ ಮಾಳಿಗೆಯ ಜಾಗಕ್ಕೆ ಒಂದು ನಾಳವೇರ್ಪಟ್ಟು ಉಸಿರಾಟ ಮತ್ತು ಆಘ್ರಾಣ ಎರಡಕ್ಕೂ ಉಪಯೋಗಿಸಲ್ಪಡುವ ಸಮಾನವಾದ ಅಂಗವಾಗುತ್ತದೆ.

ದ್ವಿಚರಪ್ರಾಣಿಗಳಲ್ಲಿ ಘ್ರಾಣೇಂದ್ರಿಯ ತಲೆಬುರುಡೆಯಲ್ಲೇ ಸೇರಿಸಲ್ಪಟ್ಟು ಉಸಿರಾಟದ ಮತ್ತು ಆಘ್ರಾಣದ ವಿಭಾಗಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಪ್ರಾಣಿಗಳಲ್ಲಿ ಅಧೋಮುಖ ಶಂಕ್ವಾಕಾರಗಳ ಹಾಗೂ ಕಣ್ಣೀರು ಮೂಗಿನೊಳಕ್ಕೆ ಹರಿಯುವ ನಾಳದ ಬೆಳವಣಿಗೆ ಕಂಡುಬರುತ್ತದೆ. ಸರೀಸೃಪ ವರ್ಗಕ್ಕೆ ಸೇರಿದ ಹಲ್ಲಿಗಳಲ್ಲಿ ಘ್ರಾಣ ಮತ್ತು ಉಸಿರಾಟದ ವಿಭಾಗಗಳು ನಿರ್ದಿಷ್ಟವಾಗಿವೆ. ಅಧೋಮುಖ ಶಂಕ್ವಾಕಾರದ ಮೂಳೆಯೊಂದು ಹೊರಪಕ್ಕದ ಗೋಡೆಯಿಂದ ಬೆಳೆದಿರುವುದು ಕಾಣುತ್ತದೆ. ಇದರ ಹತ್ತಿರ ಮೂಗಿನ ಒಂದು ದೊಡ್ಡ ಗ್ರಂಥಿ ಉಂಟು. ಮೊಸಳೆಗಳಲ್ಲಿ ಗಡುಸಾದ ಅಂಗುಳು ಮೂತಿಯ ಉದ್ದಕ್ಕೂ ಬೆಳೆದಿರುವುದರಿಂದ ಮೂಗಿನ ಹೊರದ್ವಾರಕ್ಕೂ ಒಳದ್ವಾರಕ್ಕೂ ಸಾಕಷ್ಟು ಅಂತರವಿದ್ದು ಘ್ರಾಣ ಪ್ರದೇಶದಿಂದ ತಲೆಬುರುಡೆಯ ಮೂಳೆಗಳಿಗೆ ವಾಯುಕೋಶಗಳ ಸಂಪರ್ಕ ಏರ್ಪಟ್ಟಿರುವುದು ಕಾಣಿಸುತ್ತದೆ. ಪಕ್ಷಿಗಳಲ್ಲಿ ಘ್ರಾಣಮಂಡಲ ಸರೀಸೃಪಗಳಲ್ಲಿರು ವಂತೆಯೇ ಉಂಟು. ಇದರ ಜೊತೆಗೆ ಉಸಿರಾಟದ ಅವಯವವೂ ಇದ್ದು ಅಧೋಮುಖ ಶಂಕ್ವಾಕಾರದ ಮೂಳೆ ಬೆಳೆದಿರುವುದೂ ಕಾಣಿಸುತ್ತದೆ. ಸಸ್ತನಿಗಳಲ್ಲಿ ಕಂಡುಬರುವ ವಾಸನೆಯ ಜೈವಿಕಕಾರ್ಯ ಪ್ರಾಮುಖ್ಯಕ್ಕೆ ಅನುಸಾರವಾಗಿ ಘ್ರಾಣಮಂಡಲದ ಮೂಗಿನ ಬೆಳೆವಣಿಗೆ ವಿವಿಧವಾಗಿದೆ. ಬಹು ಸಸ್ತನಿಗಳು ಬೃಹತ್ ವಾಸನಾಗ್ರಾಹಿಗಳು. ಅವುಗಳಲ್ಲಿ ಘ್ರಾಣೇಂದ್ರಿಯದ ಲೋಳೆಪೊರೆ ಹೆಚ್ಚು ಜಾಗವನ್ನು ಆಕ್ರಮಿಸಿರುತ್ತದೆ. ಕಪಿ ಮತ್ತು ಮಾನವರು ಕಿರುವಾಸನಾಗ್ರಾಹಿಗಳಾಗಿರುತ್ತಾರೆ. ಆದರೆ ಹಲ್ಲುಗಳಿರುವ ತಿಮಿಂಗಿಲಗಳಲ್ಲಿ ಘ್ರಾಣೇಂದ್ರಿಯದ ಕುರುಹೇ ಕಾಣಿಸುವುದಿಲ್ಲ. ಇವು ವಾಸನಾಗ್ರಾಹಿಗಳಲ್ಲ. ಬೃಹತ್ ವಾಸನಾಗ್ರಾಹಿ ಸಸ್ತನಿಗಳಲ್ಲಿ ಐದು ಕಾಙ್ಕಗಳಿವೆ. ಹೀಗೆ ಪ್ರಾಣಿಗಳಲ್ಲಿ ವಿಕಾಸ ರೂಪಾಂತರ ಹೊಂದುವಾಗ ಘ್ರಾಣಮಂಡಲದಲ್ಲಿಯೂ ಬದಲಾವಣೆ ಆಗುತ್ತದೆ; ಮನುಷ್ಯನಲ್ಲಿ ಇದರ ಉಪಯೋಗ ಗಣನೀಯವಾಗಿ ಕಡಿಮೆ.	(ಎಚ್.ಆರ್.ಡಿಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ